ಇಸ್ಲಾಮಿನ ಇತಿಹಾಸ
ಪ್ರಪಂಚದ ಮುಖ್ಯ ಧರ್ಮಗಳಲ್ಲಿ ಇಸ್ಲಾಂ ಒಂದಾಗಿದೆ. ಇದು ಏಷ್ಯ, ಆಫ್ರಿಕಾ ಮತ್ತು ಯೂರೋಪ್ ಖಂಡಗಳ ಅನೇಕ ಭಾಗಗಳಲ್ಲಿ ವಾಸಿಸುವ ಸುಮಾರು ನಾನೂರು ದಶಲಕ್ಷ ಜನರ ಮುಖ್ಯ ಧರ್ಮ. ಇಸ್ಲಾಂ ಎಂಬ ಪದ ಆ ಮತಾವಲಂಬಿಗಳನ್ನೂ ಪ್ರದೇಶಗಳನ್ನೂ ಸೂಚಿಸುತ್ತದೆ. ಆಧುನಿಕ ಪ್ರಪಂಚದಲ್ಲಿ ಆಫ್ಘಾನಿಸ್ತಾನ, ಆಲ್ಬೇನಿಯ, ಇರಾಕ್, ಇಂಡೋನೇಷ್ಯ, ತುರ್ಕಿ, ಟ್ಯುನೀಷಿಯ, ಪಾಕಿಸ್ತಾನ, ಮೊರಾಕೊ, ಲಿಬಿಯ, ಸಿರಿಯ, ಸೌದಿ ಅರೇಬಿಯ-ಇವು ಪ್ರಮುಖ ಮುಸ್ಲಿಂ ರಾಷ್ಟ್ರಗಳು. ಹಾಗೂ ಹೆಚ್ಚು ಸಂಖ್ಯೆಯಲ್ಲಿ ಮುಸ್ಲಿಮರು ಭಾರತ, ಆಫ್ರಿಕ, ಚೀನ, ಫಿಲಿಪ್ಪೈನ್ಸ್, ಯುಗೋಸ್ಲಾವಿಯ, ಲೆಬನಾನ್ ಮತ್ತು ಸೋವಿಯತ್ ದೇಶಗಳಲ್ಲಿದ್ದಾರೆ.

	ಮಹಮ್ಮದ್‍ನ ಅನಂತರ ಪಟ್ಟಕ್ಕೆ ಬರಬೇಕಾದವರ ವಿಷಯದಲ್ಲಿ ಭಿನ್ನಾಭಿಪ್ರಾಯವುಂಟಾಗಿ ಇಸ್ಲಾಂನಲ್ಲೂ ಮತಭೇದಗಳು ಹುಟ್ಟಿದುವು. ಇವುಗಳಲ್ಲಿ ಮುಖ್ಯವಾದುವು ಮೂರು: ಸುನ್ನತ್ ಜûಮಾತ್, ಷಿಯ ಪಂಗಡ ಮತ್ತು ವಹಾಬಿಗಳು.	

	ಮುಸ್ಲಿಮರಲ್ಲಿ ಸುನ್ನತ್ ಜûಮಾತ್ ಪಂಗಡದವರ ಸಂಖ್ಯೆ ನೂರಕ್ಕೆ ಎಪ್ಪತ್ತು. ಸುನ್ನೆ (ದಾರಿ)-ಅಂದರೆ ಸಂಪ್ರದಾಯಗಳಲ್ಲಿರುವಂತೆ ಮಹಮ್ಮದ್ ತೋರಿಸಿಕೊಟ್ಟ ದಾರಿ-ಎಂಬುದರಿಂದ ಅವರಿಗೆ ಈ ಹೆಸರು ಬಂದಿದೆ. ಕಲೀಫನನ್ನು ಆಯ್ಕೆ ಮಾಡಬೇಕೆಂದೂ ಆತ ಮೆಕ್ಕದ ಖುರಾಯಿಷ್ ಪಂಗಡದವನೊಬ್ಬನಾಗಬೇಕೆಂದೂ ಇವರ ಅಭಿಪ್ರಾಯ.

	ಕ್ರಿ. ಶ. 9ನೆಯ ಶತಮಾನದ ಹೊತ್ತಿಗೆ ನಾಲ್ಕು ನ್ಯಾಯಾಲಯಗಳು ಸುನ್ನತ್ ಪ್ರಪಂಚದಲ್ಲಿ ಹುಟ್ಟಿದುವು. ಅವು ಯಾವುವೆಂದರೆ ಹನಾಫಿ, ಮಲಿಕಿ, ಷಫೀಯತ್ ಮತ್ತು ಹನ್‍ಬಲಿತ್. ಇವು ಇಸ್ಲಾಂ ಧರ್ಮದ ವಿವಿಧ ಗುಂಪುಗಳ ಧರ್ಮ ಮತ್ತು ನ್ಯಾಯಶಾಸ್ತ್ರಗಳನ್ನು ಕ್ರಮಪಡಿಸಿದುವು. ಇವುಗಳ ಶಿಕ್ಷಣ ಪಡೆದ ವಿದ್ಯಾರ್ಥಿಗಳು ಸುನ್ನತೆ ದೇಶಗಳ ಇತಿಹಾಸದಲ್ಲಿ ಪ್ರಮುಖಸ್ಥಾನ ಗಳಿಸಿದ ಉಲೇಮಗಳಾದರು. ಅವರ ವರ್ಗದಿಂದ ನ್ಯಾಯಾಧೀಶರನ್ನೂ ಮತ್ತು ಮುಫ್ತಿಗಳನ್ನೂ ಆರಿಸಿದರು.

	ಷಿಯ ಕೂಡ ಮತ್ತೊಂದು ಮುಖ್ಯವಾದ ಪಂಗಡ. ಇವರು ಆಲಿ ಮತ್ತು ಅವನ ಅನುಯಾಯಿಗಳೇ ನಿಜವಾದ ಕಲೀಫರೆಂದು ತಿಳಿಯುತ್ತಾರೆ. ಕುರಾನಿನಲ್ಲಿ ಅಡಗಿರುವ ತತ್ತ್ವಗಳನ್ನು ಬಿಡಿಸಿ ಅರ್ಥ ಹೇಳತಕ್ಕವ ಮಹಮ್ಮದನಷ್ಟೇ ಪರಿಶುದ್ಧಾತ್ಮನೂ ದೈವನಿಯಮಿತನೂ ಆಗಿರಬೇಕೆಂದು ಹೇಳಿ, ಅಂಥವ ಮಹಮ್ಮದನ ಸೋದರ ಮಗನೂ ಅಳಿಯನೂ ಆದ ಆಲಿಯೊಬ್ಬನೇ ಎಂದು ಇವರು ಸಾಧಿಸಿದರು. ಹೀಗೆ ನಿರಂಕುಶ ಪ್ರಭುತ್ವದ ಅಭಿಪ್ರಾಯ ಆಲಿಯ ಅನುಯಾಯಿಗಳಲ್ಲಿ ಬೆಳೆಯಿತು.

	ಷಿಯ ಪಂಗಡಗಳಲ್ಲಿ 12 ಇಮಾಮಿಗಳು 7 ಇಮಾಮಿಗಳು ಎಂಬ ಒಳಪಂಗಡಗಳಿವೆ. ಈ ಪಂಗಡದವರು ಪರ್ಷಿಯದಲ್ಲೂ ಭಾರತ, ಇರಾಕ್ ಮತ್ತು ದಕ್ಷಿಣ ಲೆಬನಾನಿನಲ್ಲಿಯೂ ಇದ್ದಾರೆ. ಕಲೀಫನ ರಾಜಕೀಯ ಹಕ್ಕಿನಲ್ಲಿ ಅಲ್ಲದೆ, ನ್ಯಾಯ ಮತ್ತು ಆಚರಣೆಗಳಲ್ಲೂ ಷಿಯ ಪಂಗಡದವರು ಸುನ್ನಿಗಳಿಂದ ಬೇರೆಯಾಗಿದ್ದಾರೆ.

	ವಹಾಬಿಗಳು ಅಥವ ಅಹ್‍ಲೆ ಹದೀಗಳು ಇಸ್ಲಾಂನ ಮೂರನೆಯ ಪಂಗಡ. 1691ರಲ್ಲಿ ಅರೇಬಿಯದಲ್ಲಿ ಹುಟ್ಟಿದ ಅಬ್ದುಲ್ ವಹಾಬನ ಮಗ ಮಹಮ್ಮದ್ ಇದನ್ನು ಸ್ಥಾಪಿಸಿದ. ಇವರು ಪ್ರಾರ್ಥನೆ, ಉಪವಾಸ ಮೊದಲಾದ ವಿಷಯಗಳಲ್ಲಿ ಇತರರಿಗಿಂತ ಹೆಚ್ಚು ನೇಮಬದ್ಧರು.

	ಮುಖ್ಯವಾದ ಈ ಮೂರು ಪಂಗಡಗಳಲ್ಲದೆ ಷೈಖಿ, ಮಹ್‍ದವೀಯ ಮೊದಲಾದ ಪಂಗಡಗಳೂ ಉಂಟು. ಮಹ್‍ದವೀಯ ಪಂಗಡದವರು ಮೈಸೂರು ಮತ್ತು ಆಂಧ್ರ ಪ್ರದೇಶದಲ್ಲಿದ್ದಾರೆ. ಇವರು 12ನೆಯ ಇಮಾಮ್ ಮಹದಿ ಆಗಲೆ ಬಂದು ಹೋದನೆಂದು ನಂಬುತ್ತಾರೆ.

	ಧರ್ಮವಿಷಯದಲ್ಲಿ ತತ್ತ್ವಭೇದದಿಂದ ಹುಟ್ಟಿದ ಈ ಪಂಗಡಗಳೇ ಅಲ್ಲದೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸುಧಾರಣೆಗಳನ್ನು ಮೂಲಮಾಡಿಕೊಂಡು ಹೊರಟ, ಮತ್ತು ಶುದ್ಧ ಇಸ್ಲಾಂ ಧರ್ಮದ ಪುನರುದ್ಧಾರಕ್ಕೆ ಕೆಲಸ ನಡೆಸುತ್ತಿರುವ, ಅನೇಕ ಸಂಸ್ಥೆಗಳೂ ಹುಟ್ಟಿಕೊಂಡಿವೆ. ಈ ಸುಧಾರಣಾ ಕಾರ್ಯಗಳಿಗೆ ಮೂಲ ಕಾರಣ ಮೊಗಲ್‍ಬಾದಷಾಹಿ ಒಡೆದುಹೋಗಿ, ಮುಸ್ಲಿಮರ ಪ್ರಾಬಲ್ಯ ಕ್ಷೀಣದೆಸೆಗೆ ಬಂದು, ಪೂರ್ವ ದೇಶಗಳಿಗೆ ಕ್ರಮೇಣ ಪಾಶ್ಚಾತ್ಯ ಸಂಪರ್ಕ ಉಂಟಾಗಿ ಅದರ ಪ್ರಭಾವದಿಂದ ಜನಜೀವನದಲ್ಲಿ ಮೂಡಿದ ಒಂದು ಹೊಸ ಚ್ಯೆತನ್ಯ. ಈ ಸುಧಾರಣೆಯ ಕೆಲಸ ಸುಸಂಘಟಿತ ಸಂಸ್ಥೆಯಿಂದಾಗಲೀ ಸರ್ಕಾರದ ಬೆಂಬಲದಿಂದಾಗಲೀ ನಡೆಯುವುದಕ್ಕಿಂತ ಹೆಚ್ಚಾಗಿ ಕೆಲವು ಪ್ರಮುಖರು ವ್ಯಕ್ತಿಗಳಿಂದ ನಡೆದಿದೆ. ಹೀಗೆ ಸುಧಾರಣೆ ಮಾಡಿದವರಲ್ಲಿ ಮುಖ್ಯರಾದವರು ತುರ್ಕಿಯ ವಿಧತ್‍ಪಾಷ, ಇರಾನಿನ ಮುಖ್ಯಮಂತ್ರಿ ಮಿಸ ತಕೀಖಾನ್, ಆಫ್ಘಾನಿಸ್ತಾನದ ಸಯದ್ ಜಮಾಲುದ್ದೀನ್, ಭಾರತದಲ್ಲಿ ಬಂಗಾಳದ ಹಾಜಿ ಷರೀಯತ್ ಉಲ್ಲ ಮತ್ತು ಪಂಜಾಬಿನ ಸರ್ ಸಯದ್ ಅಹಮ್ಮದ್, ಆಫ್ರಿಕದ ಸಿದಿ ಮಹಮ್ಮದರ ಅಸ್ಟನೂಸೀ ಮೊದಲಾದವರು. ಇಸ್ಲಾಮಿನಲ್ಲಿ ನಡೆದಿರುವ ಇತ್ತೀಚಿನ ಸುಧಾರಣೆಗಳಲ್ಲಿ ತೀವ್ರ ರೀತಿಯದೂ ಬಹು ಪರಿಣಾಮಕಾರಿಯೂ ಒಂದು ರೀತಿಯಲ್ಲಿ ಕ್ರಾಂತಿಕಾರವೂ ಆದ ಚಳವಳಿ ಎಂದರೆ, ತುರ್ಕಿ ಗಣರಾಜ್ಯದ ಅಧ್ಯಕ್ಷನಾದ ಮುಸ್ತಫ ಕೆಮಾಲ್ ಪಾಷ ಕಳೆದ ಮಹಾಯುದ್ಧದ ಅನಂತರ ಹೂಡಿದ್ದು. ಈ ಚಳವಳಿಯ ಫಲವಾಗಿ ತುರ್ಕಿ ಸರ್ವ ಮುಸ್ಲಿಮ್ ಚಳವಳಿಯನ್ನು ಕನಸೆಂದೆ ಕೈಬಿಟ್ಟು, ಕಲೀಫ್ ಅಬ್ದುಲ್ ಮಜೀದನನ್ನು ಓಡಿಸಿ, ದೇಶದಲ್ಲಿ ಗಣರಾಜ್ಯ ಪ್ರಜಾಪ್ರಭುತ್ವ ಸ್ಥಾಪಿಸಿ, ತನ್ನ ಸಾಮಾಜಿಕ ಮತ್ತು ಧಾರ್ಮಿಕ ಸುಧಾರಣೆಗಳನ್ನು ರಾಷ್ಟ್ರತತ್ತ್ವದ ಮೂಲಭಾವನೆಯ ಮೇಲೆ ನಿಲ್ಲಿಸಿತು. ರಾಷ್ಟ್ರ ಪ್ರಗತಿಗೆ ಸಹಾಯವಾದದ್ದನ್ನೆಲ್ಲ ಉಳಿಸಿಕೊಂಡು, ಹಾನಿಕರವಾದ್ದನ್ನೆಲ್ಲ ಕಳೆದು ಬಿಸುಟಿತು. ಈ ಸುಧಾರಣೆಯ ಕಾರ್ಯದಲ್ಲಿ ಪಾಶ್ಚಾತ್ಯ ಅನುಕರಣೆಯೇ ಹೆಚ್ಚಾಗಿ ಜನರ ವೇಷಭೂಷಣಗಳು ಆಹಾರ ವ್ಯವಹಾರಗಳು ಎಲ್ಲವೂ ಮಾರ್ಪಾಡಾದುವು. ಇತರ ಕಡೆಗಳಲ್ಲೂ ಇದೇ ರೀತಿಯ ನೂತನ ಮನೋಭಾವಗಳು ಬೆಳೆದವು.

	ಮಹಮ್ಮದ್ ಸಾಯುವ ಒಂದೆರಡು ವರ್ಷಗಳಿಗೆ ಮುಂಚೆಯೇ ಅರೇಬಿಯದಲ್ಲೆಲ್ಲರೂ ಅವನನ್ನು ಅಧಿಪತಿಯಾನ್ನಾಗಿ ಒಪ್ಪಿಕೊಂಡರು. ಮದೀನ ಸಾಮ್ರಾಜ್ಯದ ಕೇಂದ್ರವಾಯಿತು. ಕ್ರಿ. ಶ. 632ರಲ್ಲಿ ಮಹಮ್ಮದ್ ಮಡಿದಾಗ ಅಬುಬಕರ್ ಅವನ ಅಧಿಕಾರಕ್ಕೆ ಬಂದು ಸುಮಾರು ಮೂರು ವರ್ಷ ಆಳಿದ. ಈ ಕಾಲದಲ್ಲಿ ಕೆಲವು ನಾಡುಗಳಿಗೆ ದಾಳಿ ಮೊದಲು ಮಾಡಿದ. ಎರಡನೆಯ ಕಲೀಫ ಉಮರನ ಆಳ್ವಿಕೆಯಲ್ಲಿ ಪರ್ಷಿಯ, ಈಜಿಪ್ಟ್ ಮತ್ತು ಸಿರಿಯ ದೇಶಗಳು ಕೈವಶವಾದುವು. ಮೂರನೆಯ ಕಲೀಫ ಉಸ್ಮಾನ್ ಪೂರ್ವಕ್ಕೆ ಆಫ್ಘಾನಿಸ್ತಾನದವರೆಗೂ ಪಶ್ಚಿಮದಲ್ಲಿ ಆಫ್ರಿಕದ ತ್ರಿಪೋಲಿಯವರೆಗೂ ಇಸ್ಲಾಂ ಸಾಮ್ರಾಜ್ಯವನ್ನು ವಿಸ್ತರಿಸಿದ. ನಾಲ್ಕನೆಯ ಕಲೀಫ ಆಲಿ ಸರ್ಕಾರದ ಕೇಂದ್ರವನ್ನು ಇರಾಕಿನಲ್ಲಿಯ ಕೂಫ ಪಟ್ಟಣಕ್ಕೆ ವರ್ಗಾಯಿಸಿದ. ಅಂದಿನಿಂದ ಅರೇಬಿಯ ಇಸ್ಲಾಂ ಸಾಮ್ರಾಜ್ಯದ ಒಂದು ಪ್ರಾಂತ್ಯವಾಯಿತು.

	ಸಿರಿಯ ಅರಬರಿಗೆ ಪುಣ್ಯಕ್ಷೇತ್ರವಾಗಿತ್ತು. ಕ್ರಿ. ಶ. 637ರಲ್ಲಿ ಎರಡನೆಯ ಕಲೀಫನ ಕಾಲದಲ್ಲಿ ಜೆರೂಸಲೆಂ ಮತ್ತು ಸಿರಿಯ ಇಸ್ಲಾಂ ರಾಜ್ಯಕ್ಕೆ ಸೇರಿದುವು. ಮೊದಲನೆಯ ಉಮಾಯಿದ್ ಕಲೀಫ ಮಾವಿಯ ಡಮಾಸ್ಕಸ್ಸನ್ನು ತನ್ನ ರಾಜಧಾನಿಯಾಗಿ ಮಾಡಿಕೊಂಡ. ಉಮಾಯಿದ್ ಅರಸರ ಅನಂತರ ಬಂದ ಅಬ್ಬಾಸಿದ್ದರು ಬಾಗ್ದಾದನ್ನು ರಾಜಧಾನಿಯಾಗಿ ಮಾಡಿಕೊಂಡರು. ಫಾತೆಮಿಗಳ ಆಳ್ವಿಕೆಯಲ್ಲಿ ಸಿರಿಯ ಈಜಿಪ್ಟಿಗೆ ಸೇರಿತು. ಮೊದಲ ಮಹಾಯುದ್ಧದವರೆಗೂ ಆಟೊಮನ್ ತುರ್ಕರ ಕೈಯಲ್ಲಿತ್ತು. ಅನಂತರ 1958 ಫೆಬ್ರ್ರವರಿಯಲ್ಲಿ ಸಂಯುಕ್ತ ಗಣರಾಜ್ಯ ಸ್ಥಾಪನೆಯಾಯಿತು. ಈಗ ಪುನಃ ಅದು ಒಡೆದು ಬೇರೆ ಸ್ವತಂತ್ರ ರಾಜ್ಯಗಳಾಗಿವೆ.

	ಕ್ರಿ. ಶ. 640ರಿಂದ ಈಜಿಪ್ಟ್ ಮುಸ್ಲಿಂ ದೇಶವಾಗಿದೆ ಫಾತೆಮಿಗಳ ಆಳ್ವಿಕೆಯಲ್ಲಿ ಈಜಿಪ್ಟ್ ಸ್ವತಂತ್ರ ನಾಡಾಗಿ, ಇಸ್ಲಾಂ e್ಞÁನ ಮತ್ತು ಸಂಸ್ಕøತಿಗಳ ಪ್ರಸಿದ್ಧ ಕೇಂದ್ರಗಳಲ್ಲಿ ಒಂದಾಗಿತ್ತು. ಮೊದಲನೆಯ ಕಲೀಫನ ಕಾಲದಲ್ಲಿ ಅರಬರು ಮೊದಲು ಇರಾಕಿಗೆ ದಾಳಿಯಿಟ್ಟರು. ಹದಿನೈದು ವರ್ಷಗಳೊಳಗೆ ಇರಾಕ್ ಒಂದನ್ನೇ ಅಲ್ಲದೆ ಒಟ್ಟು ಪರ್ಷಿಯವನ್ನೇ ಗೆದ್ದು ಅರಬ್ಬೀ ಸಾಮ್ರಾಜ್ಯಕ್ಕೆ ಸೇರಿಸಿಕೊಂಡರು. ಕ್ರಿ. ಶ. 750-1258ರ ವರೆಗೆ ಅಬ್ಬಾಸಿದ್ದರು ಆಳಿದರು. ಇರಾಕ್ ಷಿಯ ಪಂಗಡದ ಧರ್ಮಶಾಸ್ತ್ರ ವ್ಯಾಸಂಗಕ್ಕೆ ಮುಖ್ಯ ಕೇಂದ್ರವಾಗಿದೆ. ಕ್ರಿ. ಶ. 650ರ ವೇಳೆಗೆ ಇರಾನ್ ಅಥವಾ ಪರ್ಷಿಯದಲ್ಲೆಲ್ಲಾ ಅರಬ್ಬರ ಆಳಿಕೆ ನೆಲಸಿತು. 16ನೆಯ ಶತಮಾನದವರೆಗೂ ಪರ್ಷಿಯದ ಬಹುಭಾಗದಲ್ಲಿ ಸುನ್ನತ್ ಜûಮಾತ್ ಪಂಗಡ ಪ್ರಬಲವಾಗಿತ್ತು. ತರುವಾಯ ಷಿಯ ಪಂಗಡ ರಾಜಕೀಯ ಪ್ರಾಮುಖ್ಯ ಪಡೆಯಿತು.

	ಇಸ್ಲಾಂ ಚೀನ ದೇಶಕ್ಕೂ ಹರಡಿತು; ಅಲ್ಲಿ ಮುಸ್ಲಿಮರು ಸುಮಾರು ಮೂರು ಕೋಟಿಯಷ್ಟಿದ್ದಾರೆ. ಅಂತೆಯೇ ಫೆಸಿಫಿಕ್ ಸಾಗರದ ದ್ವೀಪಗಳಲ್ಲೂ ಅರಬ್ಬೀ ಮತ್ತು ಪಾರಸಿಕ ವ್ಯಾಪಾರಿಗಳು ಸಿಪಾಯಿಗಳು ಮುಂತಾದವರಿಂದ ಇಸ್ಲಾಂ ಧರ್ಮ ಪ್ರಚಾರಗೊಂಡಿತು. ಜಾವಾದಲ್ಲಿ ಇಸ್ಲಾಂ ಹರಡಿಕೆ ನಿಧಾನವಾಗಿ ನಡೆದರೂ ಕಾಲಕ್ರಮದಲ್ಲಿ ನ್ಯೂಗಿನಿ, ಬೋರ್ನಿಯೊ, ಸಾಂಬವ, ಸೆಲೆಬಿಸ್, ಮೊಲಕ್ಕ, ಫಿಲಿಪೈನ್ಸ್ ಇವೇ ಮೊದಲಾದ ಫೆಸಿಫಿಕ್ ಸಾಗರದ ದ್ವೀಪಗಳಲ್ಲಿ ಹರಡಿತು. ಮಹಮ್ಮದರ ಸತ್ತ 70 ವರ್ಷಗಳೊಳಗೆ ಇಸ್ಲಾಂ ಆಫ್ರಿಕದ ಪಶ್ಚಿಮಕ್ಕೆಲ್ಲ ಹರಡಿದ್ದೇ ಅಲ್ಲದೆ ಸ್ಪೇನ್ ಕೈವಶವಾಗಿ ಮುಸ್ಲಿಂ ಕಲೀಫರು ಮತ್ತು ಮುಸ್ಲಿಂ ದೊರೆಗಳು ಅದನ್ನು ಸುಮಾರು 700 ವರ್ಷಗಳ ಕಾಲ ಆಳಿದರು. 11ನೆಯ ಶತಮಾನದಲ್ಲಿ ಇಸ್ಲಾಂ ಸಹರದ ಕಡೆಗೆ ಹೊರಟು, 16ನೆಯ ಶತಮಾನದ ಕೊನೆಯ ಹೊತ್ತಿಗೆ ಅದರ ಬಹುಭಾಗದಲ್ಲೆಲ್ಲ ಹರಡಿ ಟಿಂಬಕ್ಕು ಮೊದಲಾದ ಮುಸ್ಲಿಂ ರಾಜ್ಯಗಳು ಹುಟ್ಟಿಕೊಂಡವು. ಭಾರತದಲ್ಲಿಯ ಇಸ್ಲಾಂ ಪ್ರಚಾರ ಕೆಲವು ವ್ಯಕ್ತಿಗಳ ಮೂಲಕ ನಡೆಯಿತು.

	ತನ್ನ ಉಚ್ಛ್ರಾಯ ಕಾಲದಲ್ಲಿ ತುರ್ಕಿ ಸಾಮ್ರಾಜ್ಯ ಏಷ್ಯ ಮೈನರ್, ಆರ್ಮಿನಿಯ, ಮೆಸಪೊಟೇಮಿಯ, ಸಿರಿಯ, ಅರೇಬಿಯ ಬಾಲ್ಕನ್ ರಾಜ್ಯಗಳು, ಹಂಗೇರಿ, ಈಜಿಯನ್ ದ್ವೀಪಗಳು ಈಜಿಪ್ಟ್, ಉತ್ತರ ಆಫ್ರಿಕ ಮೊದಲಾದ ಪ್ರದೇಶಗಳನ್ನು ಒಳಗೊಂಡಿತ್ತು. ತುರ್ಕರು ಸಾಮಾನ್ಯವಾಗಿ ತಮ್ಮ ಪ್ರಜೆಗಳ ಮತ ವಿಷಯದಲ್ಲಿ ಕೈಹಾಕುತ್ತಿರಲಿಲ್ಲ. ಕೆಥೊಲಿಕ್ ಮತ್ತು ಗ್ರೀಕ್ ಚರ್ಚುಗಳ ಪರಸ್ಪರ ದ್ವೇಷವೂ ಕ್ರೈಸ್ತ ವೈದಿಕರ ದಬ್ಬಾಳಿಕೆಯೂ ಸರ್ಕಾರದ ಪ್ರಭಾವವೂ ಇಸ್ಲಾಂ ಹರಡಿಕೆಗೆ ಸಹಾಯಕವಾದುವು. ಇಸ್ಲಾಂ ಪ್ರಮುಖ ಧರ್ಮವಾಯಿತು.

	ಖಿಲಾಫತ್ತಿನ ಮೊದಲ ಮೂವತ್ತು ವರ್ಷಗಳಲ್ಲಿ ಅರಬ್ಬರು ಸಿರಿಯ, ಪ್ಯಾಲಿಸ್ಟೈನ್, ಇರಾನ್, ಈಜಿಪ್ಟ್ ಮೊದಲಾದ ಪ್ರದೇಶಗಳನ್ನು ಗೆದ್ದು ಅಲ್ಲಿ ನೆಲೆಸಿದ್ದಲ್ಲದೆ, ಆ ದೇಶಗಳ ಸಂಪತ್ತನ್ನು ಅರೇಬಿಯಕ್ಕೆ ತಂದು ಹಾಕಿದ್ದರಿಂದ ದರಿದ್ರರಾಗಿದ್ದ ಅರಬ್ಬರು ಐಶ್ವರ್ಯವಂತರಾದರು. ನೆಮ್ಮದಿ ನೆಲೆಸಿ ಸಾಹಿತ್ಯದ ಕಡೆಗೆ ಗಮನ ಹರಿಯಿತು. ಈ ಕಾಲದ ಕವಿಗಳು ಮರಳುಗಾಡಿನ ಜೀವನದ ಸರಳ ಭಾವಗಳನ್ನು ಉಳಿಸಿಕೊಂಡು ಬಂದಿದ್ದರೂ ಕಾವ್ಯಪ್ರಪಂಚ ವಿಸ್ತಾರವಾಗುತ್ತ ಬಂದು ಇಸ್ಲಾಂ ತತ್ತ್ವಗಳು, ಕಲೀಫರ ಪ್ರಶಂಸೆಗಳು ಮೊದಲಾದ ಹೊಸ ವಿಷಯಗಳ ಮೇಲೂ ಕಾವ್ಯಗಳು ರಚಿತವಾದುವು. ಅಬ್ಬಾಸಿದ್ದರ ಕಾಲವನ್ನು ಅರಬ್ಬೀ ಸಾಹಿತ್ಯದಲ್ಲಿ ಸ್ವರ್ಣಯುಗವೆನ್ನಬಹುದು. ಈ ಕಾಲದಲ್ಲಿ ಇರಾನೀ ಪ್ರಭಾವವೇ ಹೆಚ್ಚಾಗಿದ್ದು ಅರಬ್ಬೀ, ಯೆಹೂದ್ಯ, ಅರಾಮೇಯಿಕ್, ಸಿರಿಯನ್ ಮೊದಲಾದ ಸಿಮಿಟಿಕ್ ಸಂಸ್ಕøತಿಗಳೂ ಬೆರೆತು, ಇಸ್ಲಾಂ ತತ್ತ್ವಗಳನ್ನು ಆಧಾರಮಾಡಿಕೊಂಡು ಒಂದು ಹೊಸ ಸಂಸ್ಕøತಿ ರೂಪುಗೊಂಡಿತು. ಅಬ್ಬಾಸಿದ್ ಮನೆತನದ ಮೊದಲ ಏಳು ಕಲೀಫರೂ ಸ್ವತಃ ವಿದ್ವಾಂಸರಾಗಿದ್ದು ವಿದ್ಯಾ ಸಾಹಿತ್ಯಗಳಿಗೆ ಆಶ್ರಯದಾತರಾಗಿದ್ದರು. ಇವರು e್ಞÁನಮಂದಿರವೊಂದನ್ನು ಸ್ಥಾಪಿಸಿ ಅನೇಕ ವಿದ್ವಾಂಸರನ್ನು ಕವಿಗಳನ್ನು ನೇಮಿಸಿ ಸಿರಿಯನ್, ಇರಾನೀ ಹಿಂದೂ ಮೊದಲಾದ ಭಾಷೆಗಳಿಂದ ಗ್ರಂಥವನ್ನು ಅರಬ್ಬಿಗೆ ಭಾಷಾಂತರ ಮಾಡಿಸಿದರು. ಬಹು ದೂರದ ದೇಶಗಳಿಂದ ಅನೇಕ ವಿದ್ವಾಂಸರೂ ಕವಿಗಳೂ ಬಾಗ್ದಾದಿನಲ್ಲಿ ಬಂದು ನೆರೆಯುತ್ತಿದ್ದರು.

	ಕಲೀಫ್ ಹಾರೂನ್ ಅಲ್ ರಷೀದನ (ಕ್ರಿ. ಶ. 786) ಕಾಲದಲ್ಲೂ ಅವನ ಮಗನ ಕಾಲದಲ್ಲೂ ಅನೇಕ ವಿದ್ಯಾಶಾಲೆಗಳೂ ಒಂದು ವಿಶ್ವವಿದ್ಯಾಪೀಠವೂ ಖಗೋಳ ಶಾಲೆಯೂ ಹಲವು ಪುಸ್ತಕ ಭಂಡಾರಗಳೂ ಸ್ಥಾಪನೆಯಾದುವು. ಅಬ್ಬಾಸಿದ್, ಫಾತಿಮಿ ಮತ್ತು ಸ್ಫೇನಿನ ಉಮಾಯದ್ ರಾಜ್ಯಗಳ ಪ್ರಧಾನ ಪಟ್ಟಣಗಳಲ್ಲೆಲ್ಲ ಪುಸ್ತಕ ಭಂಡಾರಗಳು ಸ್ಥಾಪನೆಯಾದುವು. ಸಸ್ಯಶಾಸ್ತ್ರ ವ್ಯಾಸಂಗಕ್ಕಾಗಿ ಕಾರ್ಡೋವ, ಪೆಸ್, ಕೈರೋ, ಬಾಗ್‍ದಾದ್ ಮೊದಲಾದೆಡೆಗಳಲ್ಲಿ ಪ್ರಯೋಗಕ್ಕಾಗಿ ತೋಟಗಳನ್ನು ಬೆಳೆಸಿದ್ದರು. ಅರಬ್ಬೀ ಭಾಷೆಯಲ್ಲಿ ಅತ್ಯುತ್ತಮವಾದ ಶಾಸ್ತ್ರಗ್ರಂಥಗಳು ಹಲವಿದ್ದರೂ ಖಗೋಳಶಾಸ್ತ್ರ ಮತ್ತು ಜ್ಯೋತಿಷ್ಯ ಶಾಸ್ತ್ರದವು ಬಹು ಮುಖ್ಯವಾದುವು. ಖಗೋಳ ಶಾಲೆಗಳ ನಿರ್ಮಾಣವನ್ನು ಯೂರೋಪಿನವರು ಮೊದಲು ಮುಸ್ಲಿಮರಿಂದ ಕಲಿತರು.

	ಸಂಗೀತ ಕಲಾಭ್ಯಾಸ ಉಮಾಯುದ್ಧರ ಆಳ್ವಿಕೆಯ ಕೊನೆಯಲ್ಲಿ ಮೊದಲಾಗಿ ಅಬ್ಬಾಸಿದ್ದರ ಆಳ್ವಿಕೆಯಲ್ಲಿ ಬಲಗೊಂಡು ಬೆಳೆಯಿತು. 10ನೆಯ ಶತಮಾನದಿಂದ 18ನೆಯ ಶತಮಾನದವರೆಗೆ ಇಸ್ಲಾಂ ಸಂಗೀತ ಜಗತ್ತಿನ ಕಲಾ ಸಂಸ್ಕøತಿಯ ಬೆಳೆವಣಿಗೆಗೆ ಸಹಾಯ ಮಾಡಿದೆ. ಇತರ ಪೂರ್ವ ದೇಶಗಳ ಸಂಗೀತ ಪದ್ಧತಿಗಳಂತೆಯೇ ಮುಸ್ಲಿಂ ಪದ್ಧತಿಯೂ ಲಯ ತತ್ತ್ವದ ಆಧಾರದ ಮೇಲೆ ನಿಂತಿದೆ. ಮುಸ್ಲಿಂ ಕೇವಲ ಪ್ರಾರ್ಥನಾಲಯ ಮಾತ್ರವಲ್ಲದೆ, ವಿದ್ಯಾಶಾಲೆ, ಪುಸ್ತಕ ಭಂಡಾರ, ಸತ್ರ ಮೊದಲಾದುವಾಗಿ ಉಪಯೋಗಿಸಲ್ಪಟ್ಟು ಮುಸ್ಲಿಂ ಜೀವನಕ್ಕೆ ಕೇಂದ್ರಪ್ರಾಯವಾಯಿತು. ಈ ಕಾರಣದಿಂದ ಕ್ರಮೇಣ ಮುಸ್ಲಿಂ ವಾಸ್ತುಶಿಲ್ಪದ ವೈಭವವೆಲ್ಲ ಈ ಮಸೀದಿಗಳಲ್ಲಿ ಕಂಡುಬರಲು ಅವಕಾಶವಾಯಿತು.

	ಎಲ್ಲ ಮುಸ್ಲಿಮರು ಅಣ್ಣತಮ್ಮಂದಿರು ಎಂದು ಮಹಮ್ಮದ್ ಬೋಧಿಸಿದ. ಮದುವೆಗೆ ಪ್ರೋತ್ಸಾಹ ಕೊಟ್ಟ. ಒಬ್ಬನಿಗೆ ಒಬ್ಬ ಹೆಂಡತಿ ಎಂಬುದು ಸಾಮಾನ್ಯ ಕಟ್ಟಾಯಿತು. ಆದರೆ, ಹಲವು ಹೆಂಡಿರನ್ನು ಸಾಕುವ ಶಕ್ತಿಯಿದ್ದರೆ ಒಂದಕ್ಕಿಂತ ಹೆಚ್ಚು ಮದುವೆ ಮಾಡಿಕೊಳ್ಳಲು ಅಡ್ಡಿಯಿಲ್ಲ. ವಿಧಿಬದ್ಧವಾದ ಮದುವೆಯ ಜೊತೆಗೆ ಷಿಯ ಮತ್ತು ಕೆಲವು ಪಂಗಡಗಳಲ್ಲಿ ಮುತಾ ಎಂಬ ಒಂದು ವಿಧವಾದ ಹಂಗಾಮಿ ಮದುವೆಯುಂಟು. ಇದರಲ್ಲಿ ಗಂಡಸರು ಮತ್ತು ಹೆಂಗಸರು ಒಂದು ಗೊತ್ತುಮಾಡಿಕೊಂಡ ಕಾಲ ಒಡನಿದ್ದು ಸಂಸಾರ ಮಾಡಿ, ತರುವಾಯ ವಿಘಟನೆಯಿಲ್ಲದೆ ವಿಧಿಪೂರ್ವಕ ಬೇರೆಯಾಗಬಹುದು. ಕೆಲವು ಕಾರಣಗಳಿಗೆ ಮದುವೆಯ ವಿಚ್ಛೇದವೂ ಆಗಬಹುದು. ಒಂದೇ ಮನೆತನದಲ್ಲೂ ಹತ್ತಿರ ಸಂಬಂಧದಲ್ಲೂ ಮದುವೆ ಮಾಡಿಕೊಳ್ಳುವುದು ತುಂಬ ವಾಡಿಕೆಯಲ್ಲಿತ್ತು. ಯಾವ ಯಾವ ನೆಂಟರಲ್ಲಿ ಸಂಬಂಧ ಬೆಳೆಸಬಹುದು ಬೆಳೆಸಬಾರದು ಎಂಬ ವಿಷಯವಾಗಿ ಕುರಾನಿನಲ್ಲಿ ವಿಶದವಾಗಿ ಹೇಳಿದೆ. ಚಿಕ್ಕಪ್ಪ, ದೊಡ್ಡಪ್ಪ, ಚಿಕ್ಕಮ್ಮ ದೊಡ್ಡಮ್ಮ-ವರನ ಮಕ್ಕಳನ್ನು ಮದುವೆಯಾಗುವುದು ನಿಷಿದ್ಧವಲ್ಲ. ಮದುವೆಯಲ್ಲಿ ಪ್ರಧಾನ ಕರ್ಮ ನಿಕಾ ಇದು ಅರಬ್ಬೀ ಮಾತು ಸಂಯೋಗ ಎಂದು ಅರ್ಥ. ಆದರೆ ಸಾಮಾನ್ಯವಾಗಿ ಕರಾರು ಅಥವಾ ಒಪ್ಪಂದ ಎಂಬ ಭಾವದಲ್ಲಿ ಈಗ ಪದ ಉಪಯೋಗವಾಗುತ್ತಿದೆ. ಇದಕ್ಕೆ ಬೇಕಾದದ್ದು ಗಂಡು ಹೆಣ್ಣುಗಳ ಒಪ್ಪಿಗೆ. ವಧೂವರರ ತಂದೆತಾಯಿಗಳು, ಬಂಧು ಬಳಗದವರು, ಇಷ್ಟ ಮಿತ್ರರು-ಇವರ ಸಮಕ್ಷಮದಲ್ಲಿ ಹೆಣ್ಣಿನ ಮತ್ತು ಗಂಡಿನ ಒಪ್ಪಿಗೆ ಪಡೆದು ಕುರಾನಿನ ಕೆಲವು ವಚನಗಳನ್ನು ಪಠನ ಮಾಡಿ ವಿವಾಹದ ಕೆಲವು ಸ್ತೋತ್ರಗಳನ್ನು ಹೇಳಿ ಪುರೋಹಿತ (ಕಾಜಿ) ಇಬ್ಬರಿಗೂ ಆಶೀರ್ವಾದ ಮಾಡುತ್ತಾನೆ. ತರುವಾಯ ಬಾದಾಮಿ, ಖರ್ಜೂರ, ಸಕ್ಕರೆ ಇವನ್ನು ಎರಚುತ್ತಾರೆ. ಈಗ ಕೆಲವು ಕಡೆ ಹಂಚುತ್ತಾರೆ.

	ಶ್ರೀಮಂತತನದ ಗೌರವಕ್ಕಾಗಿಯೊ ಅಥವಾ ಇತರ ಕಾರಣಗಳಿಂದಲೂ ಸೂಳೆಯರನ್ನು ಗುಲಾಮಿ ಹುಡುಗಿಯರನ್ನು ಇಟ್ಟುಕೊಳ್ಳುವುದು ಅರಬ್ಬರಲ್ಲಿ ಸಾಮಾನ್ಯವಾಗಿತ್ತು. ಇವರಲ್ಲಿ ಹುಟ್ಟಿದ ಮಕ್ಕಳಿಗೂ ಮದುವೆಯಾದ ಹೆಂಡತಿಯಲ್ಲಿ ಹುಟ್ಟಿದ ಮಕ್ಕಳಿಗೂ ಸ್ಥಾನಮಾನಗಳಲ್ಲಿ ವ್ಯತ್ಯಾಸವೇನೂ ಇರಲಿಲ್ಲ. ಪರದಾ ಪದ್ಧತಿ ಅಥವಾ ಹೆಂಗಸರು ಗಂಡಸರ ಕಣ್ಣಿಗೆ ಬೀಳದೆ ಮರೆಯಾಗಿರುವುದು ಒಂದಲ್ಲ ಒಂದು ರೀತಿಯಲ್ಲಿ ಯೂರೋಪ್ ಮತ್ತು ಏಷ್ಯ ಖಂಡಗಳ ಹಲವು ದೇಶಗಳಲ್ಲಿ ಬಹಳ ಹಿಂದಿನಿಂದ ಬಂದ ಸಂಪ್ರದಾಯ. ಈ ಪದ್ಧತಿ ಎಲ್ಲ ದೇಶಗಳಲ್ಲೂ ಒಂದೇ ಸಮನಾಗಿಲ್ಲ. ಈಗೀಗ ಜನ ಎಚ್ಚೆತ್ತು ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಬದಲಾವಣೆಗಳಿಗೆ ತಕ್ಕಂತೆ ಬದುಕನ್ನು ಮಾರ್ಪಡಿಸಿಕೊಳ್ಳುತ್ತಿರುವುದನ್ನು ನೋಡಿದರೆ ಈ ಪರದಾ ಪದ್ಧತಿಯೂ ಬೇಗ ತಪ್ಪಿಹೋಗಬಹುದೆಂದು ತೋರುತ್ತದೆ.

	ಮಗು ಹುಟ್ಟಿದ ಒಡನೆ ಅದನ್ನು ತೊಳೆದು, ತಾಯಿ ಬಸಿರಾಗಿದ್ದಾಗಲೇ ಮಾಡಿಟ್ಟುಕೊಂಡಿದ್ದ ಬಟ್ಟೆ ಹಾಕಿ, ಅದರ ಕಿವಿಯಲ್ಲಿ ಮನೆಯ ಯಜಮಾನ ಅಸಾನ್ ಜಪಿಸುತ್ತಾನೆ. ತರುವಾಯ ಮಗುವಿನ ತಂದೆಯೋ ಅಥವಾ ಮನೆಯ ಹಿರಿಯನೋ ನಾಮಕರಣ ಮಾಡುತ್ತಾನೆ. ಏಳನೆಯ ದಿನದಿಂದ 10-12 ವರ್ಷದ ವಯಸ್ಸಿನವರೆಗೆ ಯಾವಾಗಲಾದರೂ ಸುಂತಿ ನಡೆಸುತ್ತಾರೆ. ಸತ್ತವರ ಕಣ್ಣು ಬಾಯಿಗಳನ್ನು ಮುಚ್ಚಿ ಮೆಕ್ಕದ ಕಡೆಗೆ ತಿರುಗಿಸಿಟ್ಟು ಧೂಪ ಹಾಕುತ್ತಾರೆ. ಶವವನ್ನು ತೊಳೆದು ಗಂಡಸಿನ ಹೆಣವನ್ನು ಮೂರು ಹೊಸ ಬಿಳಿಯ ಬಟ್ಟೆಗಳಿಂದಲೂ ಹೆಂಗಸಿನದನ್ನು ಐದು ಹೊಸ ಬಿಳಿಯ ಬಟ್ಟೆಗಳಿಂದಲೂ ಹೊದಿಸುತ್ತಾರೆ. ಹೆಣವನ್ನು ಪೆಟ್ಟಿಗೆಯಲ್ಲಿ ಸಾಗಿಸಿ ಸ್ಮಶಾನದಲ್ಲಿ ಹೂತು ಮನೆಗೆ ಬಂದು, ಸತ್ತೆಡೆ ದೀಪವಿಡುತ್ತಾರೆ. ಮೂರನೆಯ ದಿನ ಗೋರಿಗೆ ಹೋಗಿ ಪ್ರಾರ್ಥನೆ ಮಾಡುತ್ತಾರೆ. ಏಳನೆಯ ಅಥವಾ ಹತ್ತನೆಯ ದಿನ ಜನರಿಗೆ ಊಟ ಹಾಕುತ್ತಾರೆ. 40ನೆಯ ದಿನ ನೆಂಟರಿಷ್ಟರು ಗೋರಿಗೆ ಹೋಗಿ ಸತ್ತವನ ಆತ್ಮಶಾಂತಿಗಾಗಿ ಪ್ರಾರ್ಥನೆ ಮಾಡಿ ಜನರಿಗೆ ಊಟ ಹಾಕುತ್ತಾರೆ.

	ಕುರಾನಿನಲ್ಲಿ ಹಬ್ಬಗಳನ್ನು ಹೇಳಿಲ್ಲದಿದ್ದರೂ ಎರಡು ಹಬ್ಬಗಳು ಮತಸಂಬಂಧವಾಗಿದ್ದು ಪ್ರಪಂಚದ ಎಲ್ಲ ಮುಸ್ಲಿಮರೂ ಅವನ್ನು ಆಚರಿಸುತ್ತಾರೆ. ಇವು ಈದ್-ಎ-ಸುಹಾ ಮತ್ತು ರಮ್‍ಜಾನ್. ಈದ್-ಎ-ಸುಹ ಎಂದರೆ ಬಲಿಹಬ್ಬ ಎಂದರ್ಥ. ಇದನ್ನು ಭಾರತದಲ್ಲಿ ಬಕ್ರೀದ್ ಎಂದು ಕರೆಯುತ್ತಾರೆ. ಈ ಹಬ್ಬದ ದಿನ ಮುಸ್ಲಿಮರು ಸ್ನಾನ ಮಾಡಿ ಹೊಸ ಬಟ್ಟೆ ಹಾಕಿಕೊಂಡು ಈದ್‍ಗ ಅಥವಾ ಪ್ರಾರ್ಥನಾಲಯಕ್ಕೆ ಹೋಗುತ್ತಾರೆ. ಮನೆಗೆ ಬಂದು ಪಶುಬಲಿ ಕೊಟ್ಟು ಹಬ್ಬ ಮಾಡುತ್ತಾರೆ. ರಮ್‍ಜಾನ್ ಹಬ್ಬವನ್ನು ಪೈಗಂಬರ್ ಆರಂಭಿಸಿದ್ದು. ಈ ದಿನವೂ ಮುಸ್ಲಿಮರು ಸ್ನಾನ ಮಾಡಿ ಹೊಸ ಬಟ್ಟೆಯನ್ನು ಹಾಕಿಕೊಂಡು ಈದ್‍ಗಕ್ಕೆ ಹೋಗಿ ಪ್ರಾರ್ಥನೆಯಲ್ಲಿ ಭಾಗಿಗಳಾಗುತ್ತಾರೆ. ತರುವಾಯ ನೆಂಟರಿಷ್ಟರು ಒಬ್ಬರನ್ನೊಬ್ಬರು ನೋಡಿಕೊಂಡು ಬರುತ್ತಾರೆ. ಚಿಕ್ಕವರು ದೊಡ್ಡವರ ಹರಕೆಯನ್ನು ಪಡೆಯುತ್ತಾರೆ. ಮೊಹರಂ ಸಂತೋಷದ ಹಬ್ಬವಲ್ಲ, ಹಜ್ರತ್ ಆಲಿಯ ಮಗ ಇಮಾಮ್ ಹುಸೇನ್ ಕರ್ಬಲ ಕಾಳಗದಲ್ಲಿ ಬಲಿಯಾದ ದಿನದ ನೆನಪಿಗಾಗಿ ಪ್ರತಿವರ್ಷವೂ ಮುಸ್ಲಿಮರು ಸ್ಮರಣ ವಿಧಿಯನ್ನು ಆಚರಿಸುತ್ತಾರೆ. ಇಸ್ಲಾಂ ಶಕೆ ಪ್ರಾರಂಭವಾಗುವುದು ಅಂದಿನಿಂದಲೇ. ಅಲ್ಲಿಂದ ಒಂದು ತಿಂಗಳ ಕಾಲ ಮುಸ್ಲಿಮರಿಗೆ ದುಃಖದ ದಿನಗಳು. ಇವಲ್ಲದೆ ಇನ್ನೂ ಹಲವು ಹಬ್ಬಗಳುಂಟು. ಇವು ಕೆಲವು ಪಂಗಡದವು ಮಾತ್ರವಾಗಿವೆ.										
(ವಿ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ